ಶ್ಮಶಾನ
	ದೇಹದಿಂದ ಪ್ರಾಣದ ಉತ್ಕ್ರಮಣವಾದಮೇಲೆ ಜಡವಾದ ದೇಹವನ್ನು ವಿಧಿವತ್ತಾಗಿ ಸುಡುವ, ಹೂಳುವ ಅಥವಾ ಪಶುಪ್ರಾಣಿಗಳಿಗೆ ಆಹಾರವಾಗಿ ಕೊಡುವ ಸ್ಥಳ. ರುದ್ರಭೂಮಿ ಪರ್ಯಾಯ ನಾಮ. ಮರಣದ ಬಗ್ಗೆ ಮೈಲಿಗೆಯ ಕಲ್ಪನೆಗಳು ಪ್ರಪಂಚ ವ್ಯಾಪಿಯಾದವು  (ನೋಡಿ- ಮರಣ). ಮನೆಯಲ್ಲಿ ಮರಣವಾದರೂ ಶವವನ್ನು ಮನೆಯಿಂದ ದೂರ ಕೊಂಡೊಯ್ದು ಅಲ್ಲಿ ಅಂತ್ಯಕ್ರಿಯೆಗಳನ್ನು ಮಾಡುವ ಪದ್ಧತಿ ಇದ್ದೇ ಇದೆ. ಮನೆಯಲ್ಲಿ ಶವ ಇದ್ದಮಾತ್ರಕ್ಕೆ ಮನೆಯನ್ನೆಲ್ಲ ತೊಳೆದು ಶುದ್ಧಿಮಾಡುವ ಸಂಪ್ರದಾಯ ಎಲ್ಲಡೆಗಳಲ್ಲೂ ಇದೆ; ಎಂದ ಮೇಲೆ, ಶವವನ್ನು ಆತ್ಯಂತಿಕವಾಗಿ ನಿಕ್ಷೇಪಮಾಡುವ ಅಥವಾ ಸುಟ್ಟುಬೂದಿ ಮಾಡುವ ಸ್ಥಳಕ್ಕೆ ಮೈಲಿಗೆಯ ಸೋಂಕು ತುಂಬ ಹೆಚ್ಚಿನ ಪ್ರಮಾಣದ್ದು. ಈ ಕಾರಣದಿಂದ ಶ್ಮಶಾನವನ್ನು ಊರಹೊರಗೆ ದೂರಪ್ರದೇಶದಲ್ಲಿ ಕಾಡಿನ ನಡುವೆ, ನದಿಯ ದಂಡೆಯಮೇಲೆ ನಿರ್ಮಿಸಿಕೊಂಡಿರುತ್ತಾರೆ. ಈ ಪ್ರದೇಶಕ್ಕೆ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಸತ್ತವನ ಸಂಬಂಧಿಗಳು ಮಾತ್ರ ಬರುತ್ತಾರೆ. ಉಳಿದ ಕಾಲದಲ್ಲಿ ಯಾರೂ ಬರುವುದಿಲ್ಲ. ಅಂತ್ಯಕ್ರಿಯೆ ಮುಗಿದ ಮೇಲೆ ಜನ ಮನೆಗೆ ಮರಳಿ ಸ್ನಾನ ಮಾಡಿ ಬೇರೆ ಬಟ್ಟೆಗಳನ್ನು ತೊಡುತ್ತಾರೆ. ಶ್ಮಶಾನ, ಪ್ರೇತಗಳ ವಿಹಾರಸ್ಥಾನವೆಂಬ ಕಲ್ಪನೆಯೂ ಪ್ರಚಲಿತವೇ. ಆದಿವಾಸಿಗಳಲ್ಲಿ ಶವದ ಅಂತ್ಯಕ್ರಿಯೆ ನಡೆಯುವ ಸ್ಥಳ ಪೂರ್ವನಿರ್ದಿಷ್ಟವಾಗಿರುವುದಿಲ್ಲ. ಮರಣದ ಸಮಯ ಮತ್ತು ಮರಣದ ಬಗೆ ಇವನ್ನು ಪರಿಶೀಲಿಸಿ ದೈವಜ್ಞ ಎಲ್ಲಿ ಅಂತ್ಯಕ್ರಿಯೆ ನಡೆಯಬೇಕೆಂದು ನಿರ್ಧರಿಸುತ್ತಾನೆ. ಈಗ ಸಾರ್ವತ್ರಿಕ ಶ್ಮಶಾನವಿದೆ. ಆದರೆ ಪ್ರಾಚೀನ ಸಮುದಾಯಗಳಲ್ಲಿ ಹೀಗೆ ಇರಲಿಲ್ಲ. ಶವವನ್ನು ಕಾಡಿಗೆ ಒಯ್ದು ಅಲ್ಲಿ ಎಲ್ಲೋ ಒಂದೆಡೆ ಹೂಳುತ್ತಿದ್ದರು. ಬರುಬರುತ್ತ ಇಡೀ ಸಮೂಹಕ್ಕೆ ಗೊತ್ತಾದ ಪ್ರದೇಶ ಶವಸಂಸ್ಕಾರಕ್ಕೆಂದು ಬಳಕೆಗೆ ಬಂತು. ಇದರ ಹಿಂದೆ ಸಮೂಹದ ಜನರೆಲ್ಲ ಒಂದೇ ಗೋತ್ರಕ್ಕೆ ಸೇರಿದವರೆಂದು ಪಿತೃದೈವಗಳ ವಿಹಾರಸ್ಥಾನವಾದ ಆವಾಸಸ್ಥಳವಾದ ಈ ಪ್ರದೇಶದಲ್ಲೇ ಸಮೂಹದ ಪ್ರತಿಯೊಬ್ಬ ವ್ಯಕ್ತಿಯೂ ಮರಣಾನಂತರ ಉಳಿಯಬೇಕೆಂದೂ ನಂಬಿಕೆಗಳು ಪ್ರವೃತ್ತವಾಗಿದ್ದುವು. ಸತ್ತವರೆಲ್ಲ ಆ ಸಮೂಹದ ಮೂಲ ಪುರುಷರಲ್ಲಿ ಅಂತರ್ಗತರಾಗುವರೆಂದೇ ಅವರ ಶ್ರದ್ಧೆ. ಕೆಲವು ಸಮೂಹಗ ಳಲ್ಲಿ ಜಟಿಲವಾದ ಸಾಮಾಜಿಕ ರಚನೆ ಇದ್ದಾಗ ಒಂದೊಂದು ಮನೆಗೆ ಪ್ರತ್ಯೇಕವಾದ ಶ್ಮಶಾನ ಇರುತ್ತದೆ. ಇಂಥವು ಆಧುನಿಕ ಯುಗದಲ್ಲಿಯೂ ಕಂಡುಬರುತ್ತವೆ. ಉದಾಹರಣೆಗೆ ಮಲಬಾರಿನ ನಂಬೂದಿರಿ ಜನರಲ್ಲಿ ಸತ್ತವರನ್ನು ಮನೆಯ ಹಿಂಭಾಗದಲ್ಲಿರುವ ಕಾಡಿನಂಥ ಆವರಣದಲ್ಲೇ ಸುಡುವ ಸಂಪ್ರದಾಯವಿದೆ.

	ಸಾರ್ವಜನೀನವಾದ ಶ್ಮಶಾನದ ಮುಖ್ಯಲಕ್ಷಣವೆಂದರೆ ಶುದ್ಧಿಯಾದ ಸ್ಥಳ. ಇದು ಕ್ರೈಸ್ತ, ಹಿಂದು, ಬೌದ್ಧ, ಇಸ್ಲಾಮ್, ಆದಿವಾಸಿ, ಪಾರ್ಸಿ, ಯೆಹೂದಿ ಎಲ್ಲರಿಗೂ ಸಾಧಾರಣವಾದ ವಿವರ. ಮರಣೋತ್ತರ ಕ್ರಿಯೆಗಳು ಅತಿಮುಖ್ಯವೆಂದು ಪರಿಗಣಿಸಿರುವುದರಿಂದ ಅವು ಎಲ್ಲೆಂದರಲ್ಲಿ ನಡೆಯ ಲಾರವು. ನಡೆಯುವ ಮುನ್ನ ಸ್ಥಳವನ್ನು ಮಂತ್ರದಿಂದ ಮತ್ತು ಕ್ರಿಯೆಯಿಂದ ಪವಿತ್ರಗೊಳಿಸಬೇಕೆಂಬ ನಿಯಮವಿದೆ. ಊರಿನಲ್ಲಿ ನಡೆಯುವ ಒಂದೊಂದು ಶವ ಸಂಸ್ಕಾರಕ್ಕೂ ಬೇರೆ ಬೇರೆ ಶುದ್ಧಸ್ಥಳಗಳನ್ನು ಮಾಡುವು ದಕ್ಕಿಂತ ಸದಾ ಶುದ್ಧವಾದ ಸ್ಥಳವೊಂದನ್ನು ಈ ಕೆಲಸಕ್ಕಾಗಿ ಬಳಸಬೇಕೆಂ ಬುದು ಅನುಕೂಲಸಿಂಧುವಾಯಿತು. ಹಿಂದುಗಳ ಶ್ಮಶಾನ ಶಿವನ ಆವಾಸಸ್ಥಾನವಾದುದರಿಂದ ಎಲ್ಲವನ್ನೂ ಶುದ್ಧಿಗೊಳಿಸುವ ಅಗ್ನಿ ಅಲ್ಲಿ ಪದೇ ಪದೇ ಪ್ರಜ್ವಲಿಸುತ್ತಿರುವುದರಿಂದ ಸರ್ವದಾ ಪವಿತ್ರವಾದುದು ಎನ್ನಲಾಗುತ್ತದೆ. ಕ್ರೈಸ್ತರ ಚರ್ಚ್‍ಬಳಿಯ ನಿವೇಶನ ಕೂಡ ಹೀಗೆಯೇ ಸದಾ ಶುದ್ಧವಾದುದು. ಪಾರ್ಸಿಗಳ ದಾಖ್ಮಾ(ಶ್ಮಶಾನ) ಕೂಡ ಪವಿತ್ರವಾದ ಸ್ಥಳ. ಈಜಿಪ್ಟ್ ದೇಶದಲ್ಲಿ ಸಾಮಾನ್ಯಜನ ಶವಗಳನ್ನು ಹೂಳುತ್ತಿದ್ದರು. ರಾಜಮನೆತನದವರ ಶವಗಳನ್ನು ಪಿರಮಿಡ್‍ಗಳನ್ನು ನಿರ್ಮಿಸಿ ಸಂರಕ್ಷಿಸಿಡುತ್ತಿದ್ದರು. ಪ್ರಾಚೀನ ಯಹೂದಿಗಳ ಗುಹಾಸಮಾಧಿಗ ಳೂ ಮುಂದೆ ಸಿದ್ಧವಾದ ಸಮಾಧಿಗಳೂ(ಗುಹೆಗಳು, ಮಂದಿರಗಳು) ಹೀಗೆ ವಿವಿಕ್ತವಾದ ಶುದ್ಧೀಕೃತ ಪ್ರದೇಶದಲ್ಲಿಯೇ ಇರುತ್ತಿದ್ದುವು. ಪಾಶ್ಚಾತ್ಯದೇಶಗಳಲ್ಲಿ ಇಂಥ ಪ್ರಾಚೀನ ಪದ್ಧತಿಯನ್ನು ಅನುಸರಿಸಿ ರೋಮ್, ನೇಪಲ್ಸ್, ಸಿರಾಕ್ಯೂಸ್, ಅಲೆಗ್ಸಾಂಡ್ರಿಯ ಮುಂತಾದ ಸ್ಥಳಗಳಲ್ಲಿ ಪ್ರಸಿದ್ಧವಾದ ಸಮಾಧಿಮಂದಿರಗಳು ಮೈದಳೆದವು. ಇವು ಭೂಗರ್ಭದಲ್ಲಿರುತ್ತಿದ್ದುವು. ಸಂತರು, ನಾಯಕರು ಮುಂತಾದವರ ಸಮಾಧಿಗಳ ಮೇಲೆ ಪ್ರಾರ್ಥನಾಮಂದಿರಗಳನ್ನು ನಿರ್ಮಿಸಿ ಅಲ್ಲಿ ಗೊತ್ತಾದ ದಿನಗಳಲ್ಲಿ ಸಂಬಂಧಪಟ್ಟವರೆಲ್ಲ ಕಲೆತು ಮೃತನ ಆತ್ಮಕ್ಕೆ ಸದ್ಗತಿ ದೊರೆಕುವಂತೆ ಪ್ರಾರ್ಥನೆ ಸಲ್ಲಿಸುವ ಸಂಪ್ರದಾಯವಿತ್ತು. ಯಹೂದಿಗಳಲ್ಲಿ ಮೊದಲಿಗೆ ಮನೆಯವರಿಗೇ ಮೀಸಲಾದ ಸಮಾಧಿ ಪ್ರದೇಶ ಇರುತ್ತಿತ್ತು. ಆ ಮನೆಯವರನ್ನಷ್ಟೆ ಅಲ್ಲಿ ಸಮಾಧಿಮಾಡುತ್ತಿ ದ್ದರು. ಮುಂದೆ ಕ್ರೈಸ್ತಧರ್ಮದ ಪ್ರಭಾವದಿಂದ ಕ್ರೈಸ್ತಪಾದ್ರಿಯ ವಲಯಕ್ಕೆ ಸೇರಿದ ಎಲ್ಲ ವ್ಯಕ್ತಿಗಳನ್ನೂ ಸತ್ತಾಗ ಸಮಾಧಿಮಾಡಲು ಸಾರ್ವಜನೀನವಾದ ಪ್ರದೇಶ ರೂಪುಗೊಂಡಿತು. ಶ್ಮಶಾನ ಊರಿಗೆ ಸೇರಿದ ಭಾಗ; ಯಾರೊಬ್ಬರ ವೈಯಕ್ತಿಕ ಆಸ್ತಿಯೂ ಅಲ್ಲ; ಯಾರ ಅಧಿಕಾರದಲ್ಲಿಯೂ ಇಲ್ಲ. ಕಾವಲುಗಾರರ ಮತ್ತು ಶವಸಂಸ್ಕಾರಕ್ಕೆ ಅಗತ್ಯವಾದ ಸೌಕರ್ಯಗಳನ್ನು ಒದಗಿಸುವವರ ವ್ಯವಸ್ಥೆಯನ್ನೂ ಊರಿನವರೇ ಒಟ್ಟಾರೆ ಮಾಡತಕ್ಕದ್ದು; ಶ್ಮಶಾನದ ಉಪಯೋಗವನ್ನು ಯಾರಿಗೂ ಯಾವುದೇ ಸಂದರ್ಭದಲ್ಲಿಯೂ ನಿರಾಕರಿಸತಕ್ಕದ್ದಲ್ಲ; ಅಗತ್ಯವಿದ್ದಾಗ ಅಂಥ ನಿಯಮವಿದ್ದರೆ, ಶವಸಂಸ್ಕಾರಕ್ಕೆ ನಿಗದಿಯಾದ ಹಣವನ್ನು ಅಲ್ಲಿಯೇ ಇರುವ ಅಧಿಕಾರಿಗೆ ಸಲ್ಲಿಸತಕ್ಕದ್ದು ಮುಂತಾಗಿ ನಿಯಮಗಳು ಎಲ್ಲೆಡೆಯಲ್ಲೂ ಪ್ರಚಲಿತವಾಗಿವೆ. ಅಂತ್ಯಕ್ರಿಯೆಗಳನ್ನು ನಡೆಸುವ ಸಲುವಾಗಿ ನೀರು, ದೀಪ, ಶವದ ಪೆಟ್ಟಿಗೆ, ಗುಣಿತೋಡುವ ಸಾಮಗ್ರಿಗಳು, ಸುಡಲು ಕಟ್ಟಿಗೆ ಇತ್ಯಾದಿ ಎಲ್ಲ ಸೌಕರ್ಯಗಳೂ ಬಹುಪಾಲು ಶ್ಮಶಾನದಲ್ಲಿಯೇ ದೊರೆಯುತ್ತವೆ. 

	ವಿವಿಧ ದೇಶಗಳಲ್ಲಿ ಪ್ರಚಲಿತವಾಗಿರುವ ಶವಸಂಸ್ಕಾರ ಪದ್ಧತಿಗೆ ಅನುಸಾರವಾಗಿ ಶ್ಮಶಾನದ ವ್ಯವಸ್ಥೆ ಇರುತ್ತದೆ. ಹೂಳುವ ಪದ್ಧತಿಯಿದ್ದು ಹೂತಜಾಗದಲ್ಲಿ ಸಮಾಧಿಯನ್ನೋ ಬೃಂದಾವನವನ್ನೋ ಕಟ್ಟುವುದಿದ್ದರೆ ಶ್ಮಶಾನದ ಆವರಣ ವಿಶಾಲವಾಗಿರಬೇಕಲ್ಲದೆ ಕಾಲಕಾಲಕ್ಕೆ ಹೊಸ ಶ್ಮಶಾನಗಳನ್ನು ಹುಡುಕಬೇಕಾಗುತ್ತದೆ. ಕಟ್ಟಿದ ಸಮಾಧಿಯನ್ನು ಅಥವಾ ಬೃಂದಾವನವನ್ನು ಕೆಡಿಸುವುದು ನಿಷಿದ್ಧ. ಸುಡುವ ಪದ್ಧತಿಯಿದ್ದರೆ ಎಲ್ಲ ಕಾಲಕ್ಕೂ ಒಂದು ನಿವೇಶನ ಸಾಕು. ಅಪರಕ್ರಿಯೆಗಳನ್ನು ಮಾಡುವಾಗ ಸ್ನಾನ ಮುಂತಾದ ವಿಧಿಗಳಿಗೆ ಅನುಕೂಲವಾಗುವಂತೆ ಹಳ್ಳಿಗಳ ಕಡೆ ನದಿಯ ದಡದಲ್ಲಿ ಶ್ಮಶಾನಗಳನ್ನು ವ್ಯವಸ್ಥೆ ಮಾಡುತ್ತಾರೆ. ಪಾರ್ಸಿಜನರಲ್ಲಿ ಹೂಳುವುದು, ಸುಡುವುದು ಎರಡೂ ನಿಷಿದ್ಧವಾದುದ ರಿಂದ ಹೆಣವನ್ನು ಪ್ರಾಣಿಪಕ್ಷಿಗಳು ತಿನ್ನುವಂತೆ ಇಡುವ ಪದ್ಧತಿಯಿದೆ. ಈ ಕಾರಣದಿಂದ ಅವರ ಶ್ಮಶಾನ(ದಾಖ್ಮಾ) ನಿವೇಶನದ ನಡುವೆ ಮಾನಶಿಖರ ಇದ್ದು ಅದರ ನಡುವೆ ಬಾವಿಯೊಂದು ಇರುತ್ತದೆ; ಅದರ ಸುತ್ತಲೂ ಗ್ರೀಕ್ ಬಯಲು ರಂಗಗಳ ಮಾದರಿಯಲ್ಲಿ ವರ್ತುಲಾಕಾರವಾಗಿ ಕಲ್ಲಿನ ಜಗಲಿಗಳನ್ನು ಕಟ್ಟಿರುತ್ತಾರೆ. ಹೆಣವನ್ನು ತಂದು ಮೊದಲು ಈ ಜಗಲಿಯ ಮೇಲಿರಿಸಿ ಅಲ್ಲಿ ಅಪರಕ್ರಿಯೆಗಳನ್ನು ನಡೆಸಿ ಅನಂತರ ಅದನ್ನು ಬಾವಿಗೆ ಎಸೆಯುತ್ತಾರೆ. ನಗ್ನವಾದ ಶವವನ್ನು ಮಣ್ಣು, ಕಲ್ಲು, ಗಾರೆ ಅಥವಾ ಇಟ್ಟಿಗೆ ಇವುಗಳ ಮೇಲೆಯೇ ಬಿಡಬೇಕೆಂಬ ನಿಯಮವಿದೆ. ಎರಡು ಮೂರು ಗಂಟೆಗಳಲ್ಲಿ ರಣಹದ್ದುಗಳು ಶವವನ್ನು ತಿಂದು ಮುಗಿಸುತ್ತವೆ. ಪಾರ್ಸಿ ಜನರಿಗೆ ದಾಖ್ಮಾ ಎಂದರೆ ತುಂಬ ಅಪವಿತ್ರವಾದ, ಹೇಸಿಗೆಯ ಸ್ಥಳ. ಇದರೊಳಗೆ ಇಬ್ಬರು ಪುರೋಹಿತರು (ನಾಸಾ ಸಾಲಾರರು) ಮಾತ್ರ ಪ್ರವೇಶಮಾಡಬಹುದು; ಅದೂ ಬೇರೆ ಬಟ್ಟೆಗಳನ್ನು (ಇದಕ್ಕೆ ದಾಖ್ಮಾವಸ್ತ್ರಗಳು ಎನ್ನುತ್ತಾರೆ) ಧರಿಸಿ. 

	ಉಳಿದವರೆಲ್ಲ ಹೆಬ್ಬಾಗಿಲ ಬಳಿಯೇ ನಿಂತು ಹಿಂದಿರುಗುತ್ತಾರೆ. ಹೆಬ್ಬಾಗಿಲ ಬಳಿ ಸಾಗ್ರೀ ಎನಿಸಿಕೊಳ್ಳುವ ಮಂದಿರವೊಂದು ಇರುತ್ತದೆ. ಅಲ್ಲಿಯೇ ಸತ್ತವನ ನೆಂಟರು ಅಂತ್ಯಗೌರವ ಸಲ್ಲಿಸುವುದು. 

	ಟಿಬೆಟ್ ದೇಶದಲ್ಲಿ ಊರಹೊರಗಿನ ಗುಡ್ಡದ ಮೇಲಿನ ಬೋರು ಬಂಡೆಯೇ ಶ್ಮಶಾನ. ಸಾಮಾನ್ಯವಾಗಿ ಇದು ದಟ್ಟವಾದ ಗಿಡಮರಗಳಿಂದ ನಿಬಿಡವಾಗಿರುತ್ತದೆ. ಭೂತಗಳ ಆವಾಸಸ್ಥಾನ ಇದೆಂದು ಕಲ್ಪನೆ. ಲ್ಹಾಸಾದಲ್ಲಿ ಮಾತ್ರ ಶ್ಮಶಾನ(ದುರ್ ಕ್ರೋಯದ್) ಊರ ಒಳಗೆ ಇದೆ. ಜಪಾನ್ ದೇಶದಲ್ಲಿ ಸಾರ್ವಜನೀನವಾದ ಶ್ಮಶಾನವಿದ್ದರೂ ಸಮಾಧಿಮಾಡುವಷ್ಟು ಸ್ಥಳವನ್ನು ಕೊಳ್ಳಬೇಕೆಂಬ ನಿಯಮವಿದೆ. ಶವ ಇನ್ನೂ ಮನೆಯಲ್ಲೇ ಇದ್ದಾಗ ನೆಂಟನೊಬ್ಬ ಶವದ ತಲೆಯಡಿ ಇದ್ದ ದಿಂಬನ್ನು ಶ್ಮಶಾನಕ್ಕೆ ಕೊಂಡೊಯ್ದು ಅಲ್ಲಿ ತನಗೆ ಯುಕ್ತವೆಂದು ಕಂಡುಬಂದ ಸ್ಥಳದಲ್ಲಿ ಅದನ್ನಿಟ್ಟು ಕಿಸೆಯಿಂದ ನಾಲ್ಕು ಸಣ್ಣ ನಾಣ್ಯಗಳನ್ನು ತೆಗೆದು ನಾಲ್ಕು ದಿಕ್ಕಿಗೆ ಎಸೆದು ಈ ನಾಣ್ಯಗಳಿಂದ 0.6803 ಚಮೀ ಜಾಗವನ್ನು ಭೂದೇವತೆಯಿಂದ ಕೊಂಡಿದ್ದೇನೆ ಎಂದು ಕೂಗುತ್ತಾನೆ. ಮುಂದೆ ಆ ಸ್ಥಳದಲ್ಲಿ ಸಮಾಧಿ ಕ್ರಿಯೆ ನಡೆಯುತ್ತದೆ. ಜಪಾನ್‍ದೇಶದ ಶ್ಮಶಾನ ಗಳಲ್ಲಿ ಅಂತ್ಯಕ್ರಿಯೆಗಳನ್ನು ನಡೆಸಲು ಮಂಟಪಗಳಿರುತ್ತವೆ.

	ಎಲ್ಲ ದೇಶಗಳಲ್ಲಿಯೂ ರಾಜಮನೆತನದವರಿಗೆ, ಮಠಾಧಿಪತಿಗಳಿಗೆ, ಯತಿಗಳಿಗೆ, ವಿವಿಕ್ತವಾದ ರುದ್ರಭೂಮಿಗಳಿರುತ್ತವೆ. ಇವಕ್ಕೆ ಹೊಂದಿಕೊಂ ಡಂತೆ ದೇವಾಲಯಗಳೂ ಮಠಗಳೂ ಇರುತ್ತವೆ. ಪೌರಸ್ತ್ಯ, ಪಾಶ್ಚಾತ್ಯದೇಶ ಗಳಲ್ಲಿ ಪೂಜೆಗೊಳ್ಳುವ ಸಮಾಧಿಗಳು ಶ್ಮಶಾನದಲ್ಲಿ ಇರುವುದಿಲ್ಲ. ಊರ ಒಳಗೇ ಇರುತ್ತವೆ. ಇಲ್ಲಿ ನಿತ್ಯಾರ್ಚನೆ, ನೈಮಿತ್ತಿಕ ಪೂಜೆಗಳು ನಡೆಯುತ್ತವೆ. ಇಂಥ ಆವರಣದಲ್ಲಿ ಸಮಾಧಿಚೈತ್ಯಗಳೂ ಸ್ತೂಪಗಳೂ ಇರುತ್ತಿದ್ದವು. ಐರ್ಲೆಂಡಿನ ತೈಲಟೆನ್ ರಾಜಶ್ಮಶಾನ ಪ್ರಸಿದ್ಧವಾದುದು. ಇದು ಸಮಾಧಿಶ್ಮಶಾನ. ಕಳಶ ಶ್ಮಶಾನಗಳು ನಾನಾದೇಶಗಳಲ್ಲಿ ಪುರಾತತ್ತ್ವ ಸಂಶೋಧನೆಗಳಿಂದ ಕಂಡು ಬಂದಿವೆ. ಶವವನ್ನು ಸುಟ್ಟಬಳಿಕ ಚಿತಾಭಸ್ಮ ವನ್ನು ಗಡಿಗೆಯಲ್ಲಿ ತುಂಬಿ ಅದನ್ನು ನೆಲದೊಳಗೆ ಹೂಳಿಡುತ್ತಿ ದ್ದ ಪದ್ಧತಿ ತುಂಬ ಹಿಂದಿನದು. ಕ್ರೈಸ್ತದೇವಾಲಯದ ಪರಿಸರದಲ್ಲೇ ಶ್ಮಶಾನವನ್ನು ವ್ಯವಸ್ಥೆಮಾಡುವುದೂ ಉಂಟು. ರೋಮ್ ನಗರದ ಬಳಿಯಿರುವ ಪ್ರೀಟೆ ಕ್ಸ್ಟೇಟಿಸ್, ಪ್ರಿಸ್ಕಿಲ್ಲ, ಕೆಲಿಕ್ಸ್ಟಸ್ ಇವರ ಶ್ಮಶಾನಗಳು ಈ ಬಗೆಯವು. 
ಶ್ಮಶಾನವಾಸಿಗಳಾದ ಸಂನ್ಯಾಸಿಗಳ ಪಂಥ ಭಾರತದಲ್ಲಿಯೂ ಇತರೆಡೆಗಳಲ್ಲಿಯೂ ಇತ್ತು. ವಾಮಾಚಾರ ಮತ್ತು ಅಘೋರ ತಾಂತ್ರಿಕರು ಶ್ಮಶಾನದಲ್ಲಿಯೇ ಇದ್ದುಕೊಂಡು ಚಿತಾಭಸ್ಮವನ್ನು ಧರಿಸಿಕೊಂಡು ಶವದ ಸಮ್ಮುಖದಲ್ಲಿ ತಮ್ಮ ನಿತ್ಯವಿಧಿಗಳನ್ನು ಪೂರೈಸುತ್ತಿದ್ದರು. ಹಳೆಯ ನೆಸ್ಟೋರಿಯನ್ ಪಂಥದ ಕ್ರೈಸ್ತರೂ ಶ್ಮಶಾನದ ಶಾಂತಿಯಲ್ಲಿ ಧ್ಯಾನ ಜಪಗಳನ್ನು ನಿರ್ವಹಿಸುವ ಸಂಪ್ರದಾಯ ಇತ್ತು. ಬೌದ್ಧಪಂಥದ ಧ್ಯಾನಮಾ ರ್ಗದಲ್ಲಿ ಸತಿಪಟ್ಠಾನದ ವಿಷಯಗಳಲ್ಲಿ ಶ್ಮಶಾನದ ಕಳೇಬರದ ಧಾತು ವ್ಯವಸ್ಥಾನವನ್ನು ಕುರಿತು ನಡೆಸಬೇಕಾದ ಧ್ಯಾನವಿದೆ. ವಿರಕ್ತಿಯನ್ನು ಗಳಿಸಿ ಕೊಳ್ಳುವ ಸಲುವಾಗಿ ಶ್ಮಶಾನಕ್ಕೆ ತೆರಳುವ ಕಲ್ಪನೆಯೂ ಸರ್ವವ್ಯಾಪಿಯಾದುದು. ಇಸ್ಲಾಮ್ ಧರ್ಮದ ದರ್ವೆಶ್ ಎಂಬ ಯತಿಗಳೂ ಶ್ಮಶಾನಪ್ರಿಯರು.

	ಪ್ರಾಚೀನ ಕಾಲದಿಂದಲೂ ಊರು ವ್ಯವಸ್ಥೆಯಾದೊಡನೆ ಅದಕ್ಕೆ ಹೊಂದಿಕೊಂಡಂತೆ ಶ್ಮಶಾನವನ್ನು ಏರ್ಪಡಿಸುವ ಪದ್ಧತಿ ರೂಢಿಯಲ್ಲಿತ್ತು. ಊರಿಗೊಂದು ಸುಡುಗಾಡು ಎಂಬ ನಾಣ್ನುಡಿಯನ್ನೂ ಈ ಸಂದರ್ಭದಲ್ಲಿ ಗಮನಿಸಬಹುದು. ಶ್ಮಶಾನದ ಪರಿಕಲ್ಪನೆಯಲ್ಲಿ ಸಾಮಾಜಿಕ, ಕಾಲ್ಪನಿಕ ಮತ್ತು ಧಾರ್ಮಿಕ ಭಾವನೆಗಳು ಸೇರಿಬಂದಿರುವುದು ಕಾಣುತ್ತದೆ. ಮರಣದ ವಿಚಾರವಾಗಿ ಒದಗಿಬಂದ ಭೀತಿ, ನಿರೀಕ್ಷೆ, ನಿರಾಸೆ, ಆತಂಕ, ಉದ್ವೇಗ ಎಲ್ಲ ಭಾವನೆಗಳೂ ಶ್ಮಶಾನದಲ್ಲಿ ಅಂತರ್ಗತವಾಗಿವೆ. 

	(ಎಸ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ